ಶ್ರೀ ಸುಬ್ರಹ್ಮಣ್ಯ ಸಭಾದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ತ್ರಿಮತಸ್ಥ ಬ್ರಾಹ್ಮಣರು ಒಗ್ಗಟ್ಟಾಗಿದ್ದು ಸರಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆಯಬೇಕು ಮತ್ತು ತಮ್ಮ ಹಕ್ಕಿನ ಅವಶ್ಯಕತೆಗಳಿಗೆ ಸರಕಾರದ ಗಮನ ಸೆಳೆಯಲು ಸಫಲರಾಗಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶ್ರೀ ಸಚ್ಚಿದಾನಂದ ಮೂರ್ತಿಗಳು ಬ್ರಾಹ್ಮಣರಿಗೆ ಕರೆ ನೀಡಿದರು. ಶ್ರೀ ಸುಬ್ರಹ್ಮಣ್ಯ ಸಭಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ಥಾನಿಕ ಬ್ರಾಹ್ಮಣ ಸಮಾಜವು ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ಕಳೆದ ೧೧೨ ವರ್ಷಗಳಿಂದ ಬ್ರಾಹ್ಮಣ ಸಮಾಜದ ೧೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅತೀ ಕನಿಷ್ಠ ಬೆಲೆಯಲ್ಲಿ ವಸತಿ ವ್ಯವಸ್ಥೆಯನ್ನು ಮಾಡುತ್ತಿದ್ದು ಇದೀಗ ಪುತ್ತೂರಿನ `ಶಿವಸದನ’ದಲ್ಲಿ ಹಿರಿಯ ನಾಗರಿಕರ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿನಿಲಯವನ್ನು ಸ್ಥಾಪಿಸಿದೆ. ಅಷ್ಟೇ ಅಲ್ಲದೆ ಸುಬ್ರಹ್ಮಣ್ಯ ಸಹಕಾರ ಸಂಘವು ೮ ಶಾಖೆಗಳ ಮೂಲಕ ಸರ್ವರ ಅವಶ್ಯಕತೆಗಳನ್ನು ಪೂರೈಸುವ ಕಾರ್ಯವನ್ನು ಮಾಡುತ್ತಿದೆ. ನಮ್ಮ ಮಂಡಳಿಯ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬ್ರಾಹ್ಮಣರ ಏಳಿಗೆಗೆ ನಾವೆಲ್ಲರೂ ಪ್ರಯತ್ನಿಸೋಣ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಭಾದ ಅಧ್ಯಕ್ಷರಾದ ಶ್ರೀ ಹರ್ಷಕುಮಾರ್ ಕೇದಿಗೆಯವರು ವಹಿಸಿಕೊಂಡಿದ್ದರು. ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ಸುಮಂಗಲ ರಾವ್ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ದ್ವಿತೀಯ ರ್ಯಾಂಕ್ ವಿಜೇತೆ ಕುಮಾರಿ ನಿಧಿ ರಾವ್ರವರನ್ನು ಸನ್ಮಾನಿಸಲಾಯಿತು.
ಶಾರದಾಂಬಾ ಭಜನಾ ಮಂಡಳಿಯವರ ಭಜನಾ ಕಾರ್ಯಕ್ರಮದ ಬಳಿಕ ಪ್ರಾರ್ಥನೆಯನ್ನು ಶ್ರೀಮತಿ ಕುಸುಮಾ ನವೀನ್ ಕುಮಾರ್, ಶ್ರೀಮತಿ ಸ್ನೇಹಲತಾ ದಿವಾಕರ್, ಶ್ರೀಮತಿ ಪುಷ್ಪಾವತಿ ಶ್ರೀನಿವಾಸ್ ನಡೆಸಿದರು. ಬ್ರಹ್ಮಶ್ರೀ ಪ್ರತಾಪ್ ಶರ್ಮರು ವೇದಘೋಷ ಪಠಿಸಿದರೆ, ಬ್ರಹ್ಮಶ್ರೀ ವಾಗೀಶ ಶಾಸ್ತಿçಗಳು ಆರ್ಶೀವಚನ ನೀಡಿದರು. ಶ್ರೀ ಸಭಾದ ಕಾರ್ಯದರ್ಶಿ ಶ್ರೀ ಕರುಣ್ ರಾವ್ ಬೆಳ್ಳೆ ಸರ್ವರನ್ನ ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀ ಸಭಾದ ಉಪಾಧ್ಯಕ್ಷೆ ಶ್ರೀಮತಿ ಸುಮಂಗಲಾ ಪ್ರಭಾಕರ್, ಉಪಮೇಯರ್ ಶ್ರೀಮತಿ ಸುಮಂಗಲ ರಾವ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನಿರ್ದೇಶಕರಾದ ಶ್ರೀ ಶಿವರಾಂ ಉಡುಪ, ಶ್ರೀ ಪವನ ಕುಮಾರ್ ಆಸೀನರಾಗಿದ್ದರು. ಶ್ರೀಮತಿ ಶೈಲಜಾ ಶ್ರೀಕಾಂತ್, ಶ್ರೀಮತಿ ವಲ್ಲಿ ಜ್ಞಾನೇಶ್ ಸನ್ಮಾನಿತರ ಪರಿಚಯ ಮಾಡಿದರು. ಶ್ರೀ ಸಭಾದ ಉಪಾಧ್ಯಕ್ಷರಾದ ಡಾ. ಎ. ಪಿ. ಕೃಷ್ಣ ಧನ್ಯವಾದ ನೀಡಿದರು. ಶ್ರೀ ಸಭಾದ ಕೋಶಾಧಿಕಾರಿ ಶ್ರೀ ಪಿ. ಶ್ರೀಕಾಂತ್ ರಾವ್ ಕಾರ್ಯಕ್ರಮ ನಿರೂಪಿಸಿದರು.